ಸೋಮವಾರ, ಡಿಸೆಂಬರ್ 29, 2014

PK ಹಿಂದು ವಿರೋಧಿ ಚಿತ್ರವಂತೆ ..

ಇವತ್ತು pk ಚಲನಚಿತ್ರವನ್ನ ನೋಡಿದೆ. ಅದರಲ್ಲಿ ಹಿಂದುತ್ವವನ್ನ ಹಿಂದೂ ಆಚರಣೆಗಳನ್ನ ಹಿಂದೂ ದೇವರುಗಳನ್ನ ಹೀಯಾಳಿಸುವಂತ ಅಥವಾ ಕೆಳಮಟ್ಟದಲ್ಲಿ ತೋರಿಸುವ ಯಾವುದೇ ಅಂಶಗಳು ನನಗೆ ಕಂಡುಬಂದಿಲ್ಲ.. ಅದೇನೊ ಅಂತಾರಲ್ಲ "ಇದ್ದಿದ್ದು ಇದ್ದಂಗೆ ಹೇಳಿದರೆ ಎದ್ಬಂದು ಎದೆಗೆ ಒದ್ದರಂತೆ" ಅಂತ,ಹಾಗೆ ಇಲ್ಲೂ ಆಗಿದೆ.. ಈ ಚಿತ್ರದಲ್ಲಿರೋ ಸಾಮಾಜಿಕ ಕಳಕಳಿಯನ್ನ ಅರಿಯದ ಜನ ಇದೊಂದು ಹಿಂದೂ ವಿರೋಧಿ ಚಿತ್ರ ಅಂತ ಬಾಯಿ ಬಡ್ಕೋತಿದಾರಲ್ಲ ಅದೇ ಜನ ಒಂದು ಬಾರಿ ಆ ಚಿತ್ರವನ್ನ ಹಿಂದುವಾಗಿ ಅಲ್ಲ ಒಬ್ಬ ನಾಗರಿಕನಾಗಿ ಸರಿ ತಪ್ಪುಗಳನ್ನ ತರ್ಕಿಸಬಲ್ಲ ವ್ಯಕ್ತಿಯಾಗಿ ನೋಡಲಿ. ಆಗ ಮಾತ್ರ ಈ ಚಿತ್ರದಲ್ಲಿರೋ ಒಳ್ಳೆ ಅಂಶಗಳು ಅವರಿಗೆ ಕಾಣಲು ಸಾಧ್ಯ. ಇದೇ ತಳಪಾಯವನ್ನ ಹೊಂದಿದ್ದ ಮತ್ತೊಂದು ಚಿತ್ರ "Oh my god" ನಲ್ಲಿ ಕಾಣದ ಹಿಂದು ವಿರೋಧಿ ಅಂಶಗಳು ಈ ಚಿತ್ರದಲ್ಲಿ ಗೋಚರಿಸೋಕೆ ಕಾರಣವೇನು? ಈ ಚಿತ್ರದಲ್ಲಿ ನಟಿಸಿರುವವ ಒಬ್ಬ ಮುಸ್ಲಿಂ ಅನ್ನೊದಾ? ಈ ಚಿತ್ರದಲ್ಲಿ ಲವ್ ಜಿಹಾದ್ ಎಲ್ಲಿದೆ? ಒಬ್ಬ ಮುಸ್ಲಿಂ ಹಿಂದೂ ಹುಡುಗಿಯನ್ನ ಪ್ರೀತಿಸಿದರೆ ಅದು ಲವ್ ಜಿಹಾದ್ ಅಗಲಾರದು.. ಅದೇ ಅವನು ಕೇವಲ ಧಾರ್ಮಿಕ ಕಾರಣಕ್ಕಾಗಿ ಹಿಂದೂ ಹುಡುಗಿಯನ್ನು ಪ್ರೀತಿಸಿದರೆ ಮೋಸ ಮಾಡಿದರೆ ಅದು ಲವ್ ಜಿಹಾದ್.. ನಾನು ಒಬ್ಬ ಹಿಂದೂವಾಗಿ ನನ್ನ ಧರ್ಮವನ್ನು ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ಆದರೆ ಅದರರ್ಥ ನಾನು ಬೇರೆ ಧರ್ಮವನ್ನು ದ್ವೇಷಿಸಬೇಕಂತ ಅಲ್ಲ. ಪ್ರತಿಯೊಬ್ಬ ನಾಗರಿಕನೂ ಯೋಚಿಸಬೇಕಾದ ಚಿಂತನೆಯಿದೆ ಈ ಚಿತ್ರದಲ್ಲಿ..ಕೇವಲ ಹಿಂದೂ ಧರ್ಮವೇ ಅಲ್ಲ ಎಲ್ಲ ಧರ್ಮದ ಬಗ್ಗೆಯೂ ವಿಮರ್ಶೆ ಇದೆ ಈ ಚಿತ್ರದಲ್ಲಿ. ಅದ್ಯಾವುದೋ ಗಮನಿಸದೆ ಇದೊಂದು ಧಾರ್ಮಿಕತೆಯನ್ನು ವಿರೋಧಿಸುವ ಚಿತ್ರವೆಂದು ಹಣೆಪಟ್ಟಿ ಕಟ್ಟುತ್ತಿರುವ ಜನರಿಗೆ ಏನನ್ನಬೇಕು ತಿಳಿಯದಾಗಿದೆ. ಈ ಚಿತ್ರದ ಉದ್ದೇಶವನ್ನು ಅರಿತರೆ ಪ್ರತಿಯೊಬ್ಬ ನಾಗರಿಕನೂ ಇಷ್ಟ ಪಡುವಂತ ತರ್ಕಿಸುವಂತ ಚಿತ್ರ ಇದು. "ದೇವಸ್ಥಾನದಲ್ಲಿ ಹಾಕುವ ಕಾಣಿಕೆಯನ್ನು ಹೊರಗೆ ಕೂತಿರುವ ಭಿಕ್ಷುಕನಿಗೆ ನೀಡುವುದು ಉತ್ತಮ. ದೇವರಿಗೆ ಕೈ ಜೋಡಿಸುವುದಕ್ಕಿಂತ ಕಷ್ಟದಲ್ಲಿರುವವರ ಕೈ ಹಿಡಿಯುವುದು ಪುಣ್ಯದ ಕೆಲಸ. ದೇವರಿಗೆ ಗುಡಿ ಕಟ್ಟುವುದಕ್ಕಿಂತ ಬಡವರಿಗಾಗಿ ಮನೆ ಕಟ್ಟುವುದು ಉತ್ತಮ. ಭಗವಂತ ನಮ್ಮನ್ನೆಲ್ಲ ಹುಟ್ಟಿಸಿದ ತಂದೆ ಎಂದಾದರೆ ಅವನೆಂದು ನಮ್ಮ ಹತ್ತಿರ ಲಂಚ ಕೇಳಲಾರ. ಹರಕೆ ಕಟ್ಟಿಕೊಳ್ಳಲು ಉಪವಾಸ ಮಾಡಲು ಮುಡಿ ಕೊಡಲು ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳಲು ಹೇಳಲಾರ.. ಯಾವ ತಂದೆ ತಾನೇ ಮಕ್ಕಳಿಂದ ವಜ್ರದ ಕಿರೀಟ , ಬಂಗಾರದ ಕವಚ , ಒಡವೆ , ದುಡ್ಡನ್ನು ಕೇಳುತ್ತಾನೆ? ಇಷ್ಟಕ್ಕೂ ಇಡೀ ಜಗತ್ತನ್ನು ನಮ್ಮನ್ನು ಸೃಷ್ಟಿಸಿದ ದೇವರು ಬಡವನೇನು? ಅವನಿಗೇನು ಕೊರತೆ ದುಡ್ಡಿನದು? ಅವನು ಸರ್ವಾಂತರ್ಯಾಮಿ ಆಗಿರುವಾಗ ಅವನನ್ನೇಕೆ ಒಂದು ಕೋಣೆಯಲ್ಲಿ ಒಂದು ಮೂರ್ತಿಯಲ್ಲಿ ಕಲ್ಲಿನಲ್ಲಿ ಕಾಣಲು ಪ್ರಯತ್ನಿಸುತ್ತೀರಾ?" ಅನ್ನೋ ಪ್ರಶ್ನೆಯನ್ನು ಹುಟ್ಟಿ ಹಾಕಿರುವ ಈ ಎರಡು ಚಿತ್ರಗಳು ನಾ ನೋಡಿರುವ ಅತ್ಯುತ್ತಮ ಚಿತ್ರಗಳಲ್ಲಿ ಎರಡು. ಈ ಚಿತ್ರವನ್ನು ನೋಡಿರುವ ಮತ್ತು ಇದನ್ನು ಹಿಂದೂ ವಿರೋಧಿ ಚಿತ್ರವೆಂದು ಕರೆದಿರುವ ಹಾಗು ಹಾಗೆ ಕರೆಯುತ್ತಿರುವವರನ್ನು ಬೆಂಬಲಿಸುತ್ತಿರುವ ಬುಧ್ಧಿವಂತರು ದಯವಿಟ್ಟು ಆ ಚಿತ್ರದಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರವಿದೆಯ ಅಂತ ನಿಮ್ಮನ್ನು ನೀವೇ ಕೇಳಿಕೊಳ್ಳಿ.. ಆಗಲೂ ಸರಿ ಎನಿಸದಿದ್ದರೆ ಯಾವುದೇ ಧರ್ಮವನ್ನು ಅನುಸರಿಸದಿರುವ ಒಂದು ಮಗುವಿನ ಸ್ಥಾನದಲ್ಲಿ ನಿಂತು ಈ ಚಿತ್ರಗಳನ್ನು ವೀಕ್ಷಿಸಿ.. ಆಗ ನಿಮಗೆ ಈ ಚಿತ್ರ ಅರ್ಥವಾಗಲು ಇಷ್ಟವಾಗಲು ಸಾಧ್ಯ.

ಕಾಮೆಂಟ್‌ಗಳಿಲ್ಲ: